ಶಂಕರ್, ಎಂ ಪಿ
	(1935- ). ಶಂಕರ್ ಪರಿಸರಪ್ರೇಮಿ, ಅರಣ್ಯಸಂರಕ್ಷಣೆ, ವನ್ಯಜೀವಿಗಳ ಸಂರಕ್ಷಣೆಯಲ್ಲಿ ಅಪಾರ ಆಸಕ್ತಿ. ಚಿತ್ರಮಾಧ್ಯಮದ ಮೂಲಕ ಈ ಬಗೆಗೆ ಜನಜಾಗೃತಿ ಮೂಡಿಸಲು ಆಸಕ್ತರಾದರು. ಶಂಕರ್ ಹುಟ್ಟಿದ್ದು ಬಡಕುಟುಂಬದಲ್ಲಿ. ತಂದೆ ಪುಟ್ಟಲಿಂಗಪ್ಪ, ತಾಯಿ ಗಂಗಮ್ಮ. ಜನನ ಮೈಸೂರಿನಲ್ಲಿ ಆಗಸ್ಟ್ 20, 1935ರಂದು. ಬನುಮಯ್ಯ ಶಾಲೆಯಲ್ಲಿ ವಿದ್ಯಾಭ್ಯಾಸ. ಎಸ್.ಎಸ್.ಎಲ್.ಸಿ ಮುಗಿಸಿದ ಮೇಲೆ ವಿದ್ಯಾಭ್ಯಾಸ ಮುಂದುವರೆಸಲು ಬಡತನ ಅಡ್ಡಿ. ದುಡಿಮೆಯ ಪ್ರಶ್ನೆ ಎದುರಾದಾಗ ನೆರವಿಗೆ ಬಂದದ್ದು ಶಾಲೆಯಲ್ಲಿ ಓದುತ್ತಿದ್ದಾಗ ನಡೆಸಿದ ಸಾಂಸ್ಕøತಿಕ ಚಟುವಟಿಕೆ. ಉತ್ತಮ ಕಲಾವಿದನೆಂಬ ಮೆಚ್ಚುಗೆ ಪಡೆದಿದ್ದ ಅನುಭವ ಗಳಿಸಿದ್ದ. ಆ ವೇದಿಕೆಯೇ ಹದಿನೆಂಟರ ಹರೆಯದ ಶಂಕರ್‍ಗೆ ಮುಂದಿನ ಕಲಾಜೀವನಕ್ಕೆ ನಾಂದಿಯಾಯಿತು. 

ಆರಂಭದಲ್ಲಿ ಬೇರೆ ಬೇರೆ ಕಲಾಸಂಸ್ಥೆಗಳಲ್ಲಿ ಭಾಗವಹಿಸುತ್ತಿದ್ದ ಶಂಕರ್ ತಮ್ಮದೇ ಆದ ಕಲಾಸಂಘ ಸ್ಥಾಪಿಸಿದರು. `ಭರಣಿ ನಕ್ಷತ್ರದಲ್ಲಿ ಹುಟ್ಟಿದರೆ ಧರಣಿ ಆಳುವ ಯೋಗವಂತೆ. ಆ ನಾಣ್ನುಡಿಯ ಪ್ರೇರಣೆ ಇರಬೇಕು. ತಮ್ಮ ನಾಟಕ ಸಂಸ್ಥೆಗೆ `ಭರಣಿ ಕಲಾವಿದರೆಂದು ನಾಮಕರಣ ಮಾಡಿದರು. ಗದಾಯುದ್ಧ, ಎಚ್ಚಮನಾಯಕ, ರಾಜಾಗೋಪಿಚಂದ್ ಮೊದಲಾದ ನಾಟಕಗಳನ್ನು ರಾಜ್ಯದಾದ್ಯಂತ ಪ್ರದರ್ಶಿಸಿದರು. ಯಶಸ್ವಿಯೂ ಆದರು. ಹುಣಸೂರು ಕೃಷ್ಣಮೂರ್ತಿಗಳ ರತ್ನಮಂಜರಿ(1962)ಯಲ್ಲಿ ಖಳನಾಯಕನಾಗಿ ಚಿತ್ರರಂಗ ಪ್ರವೇಶ. ಶ್ರದ್ಧೆಯಿಂದ ಅಭಿನಯಿಸಿದರು. ಜನಮೆಚ್ಚುಗೆಗೆ ಪಾತ್ರರಾದರು. ಎರಡನೇ ಚಿತ್ರ `ವೀರಸಂಕಲ್ಪ, ಜಗರಾಯನ ಪಾತ್ರಕ್ಕೆ ಚಿತ್ರಪ್ರೇಮಿಗಳಿಂದ `ಖಳನಾಯಕ ಪ್ರಶಸ್ತಿ ಪುರಸ್ಕಾರ. `ಸತ್ಯ ಹರಿಶ್ಚಂದ್ರ(1965)ದಲ್ಲಿ ವೀರಬಾಹುವಿನ ಪಾತ್ರ, ನಿರ್ವಹಿಸಿದರು. `ಕುಲದಲ್ಲಿ ಕೀಳ್ಯಾವುದೋ....... ಹಾಡು, ನೃತ್ಯಾಭಿನಯ ಜನರ ನೆನಪಿನಿಂದ ಇನ್ನೂ ಮಾಸಿಲ್ಲ. ಶಂಕರ್ ಅಭಿನಯದ ವೈವಿಧ್ಯತೆಯನ್ನು ತೋರಿದ ಮತ್ತೊಂದು ಚಿತ್ರ `ಭೂತಯ್ಯನ ಮಗ ಅಯ್ಯು(1974). ಮೈಸೂರಿನ ಚಿತ್ರಪ್ರೇಮಿಗಳು ಶಂಕರ್ ಅವರ ಮನೆಗೆ `ಭೂತಯ್ಯನ ಮನೆ ಎಂದೂ, ಮನೆಯ ಮುಂದಿನ ವೃತ್ತಕ್ಕೆ `ಭೂತಯ್ಯನ ವೃತ್ತ ಎಂದೂ ನಾಮಕರಣ ಮಾಡಿ, ತಮ್ಮ ಮೆಚ್ಚುಗೆ ದಾಖಲಿಸಿದ್ದರು.

ತಮ್ಮ ಮಿತ್ರ ರಂಗಪ್ಪನವರ ಜೊತೆಗೂಡಿ ಸ್ವತಃ ಚಿತ್ರನಿರ್ಮಾಣಕ್ಕೆ ತೊಡಗಿದರು. ಚಿತ್ರಸಂಸ್ಥೆಗೂ ಭರಣಿ ಎಂದೇ ಹೆಸರಿಟ್ಟರು. ಭರಣಿ ಲಾಂಛನದಲ್ಲಿ ತಯಾರಾದ ಮೊದಲ ಚಿತ್ರ `ಕಾಡಿನ ರಹಸ್ಯ(1968) ಯಶಸ್ವಿಯಾಯಿತು. ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಭಾಷಾಂತರಗೊಂಡು ಪ್ರದರ್ಶಿತವಾಯಿತು. ಭರಣಿ ಚಿತ್ರ ಲಾಂಛನದಲ್ಲಿ `ಕಳ್ಳರ ಕಳ್ಳ, `ನಾರಿ ಮುನಿದರೆ ಮಾರಿ', `ಗಂಧದ ಗುಡಿ', `ರಾಮಲಕ್ಷ್ಮಣ', `ಶ್ರೀಮಾನ್, `ನಾನೇ ರಾಜ', `ವಿಜಯ ಖಡ್ಗ, `ಒಂದೇ ಗುರಿ', `ಕಾಡಿನ ರಾಜ', `ಮೃಗಾಲಯ, `ಗಂಧದ ಗುಡಿ ಭಾಗ-2', `ಗಿಡ್ಡುದಾದ, `ಕೆಂಪು ಸೂರ್ಯ ಮೊದಲಾದ 14 ಚಿತ್ರಗಳನ್ನು ನಿರ್ಮಿಸಿದ್ದಾರೆ. `ವೀರ ಸಂಕಲ್ಪ, `ಮೇಯರ್ ಮುತ್ತಣ್ಣ, `ಭೂಲೋಕದಲ್ಲಿ ಯಮರಾಜ', `ದೂರದ ಬೆಟ್ಟ, `ನಾಗರಹಾವು ಇವೇ ಕೆಲವು ಚಿತ್ರಗಳ ಪಾತ್ರಗಳಲ್ಲಿನ ಅಭಿನಯ ಸ್ಮರಣಿಯ. ದೃಢಕಾಯ ಆದರೆ, ಮೃದು ಹೃದಯಿ.

ಸುಮಾರು ನಾಲ್ಕು ದಶಕಗಳ ಕಾಲ ರಂಗಭೂಮಿ, ಚಲನಚಿತ್ರರಂಗದಲ್ಲಿ ದುಡಿದು, ಜನಪ್ರಿಯ ಖಳನಟನಾಗಿರುವ ಶಂಕರ್, ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್, ಅನಂತನಾಗ್, ಉದಯಕುಮಾರ್, ಶಿವರಾಜಕುಮಾರ್, ಕೆ ಎಸ್ ಅಶ್ವತ್, ಕಲ್ಪನಾ, ಅಂಬಿಕಾ, ಮಾಧವಿ, ಗೀತಾ, ಮಾಲಾಶ್ರೀ, ಪಂಢರಿಬಾಯಿ, ಲೀಲಾವತಿ, ಜಾನಕಿ ಮೊದಲಾದ ಪ್ರಮುಖ ನಟ ನಟಿಯರ ಜೊತೆ ಅಭಿನಯಿಸಿದ್ದಾರೆ.

ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗಕ್ಕೆ, ರಂಗಭೂಮಿಗೆ ಎಂ.ಪಿ. ಶಂಕರ್ ಸಲ್ಲಿಸಿರುವ ಸೇವೆಗೆ ಕರ್ನಾಟಕ ಸರಕಾರದ 2005ರ ರಾಜಕುಮಾರ್ ಪ್ರಶಸ್ತಿಯ ಮುಕುಟ.
								(ಕೃಷ್ಣ ವಟ್ಟರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ